Description
ಮಿಥಿಲೆಯ ಮಾವಿನ ಮರ – ಕವನ ಸಂಕಲನ
ಗತದೆದುರು ವರ್ತಮಾನ, ವರ್ತಮಾನದೆದುರು ಗತಗಳನ್ನು ಎದುರಾಬದುರಾಗಿಟ್ಟು ರೂಪಕಗಳ ದಾಳ ಉರುಳಿಸುತ್ತಾ ಪ್ರಶ್ನೆಗಳ ಚದುರಂಗದ ಮೇಲೆ ಕಾವ್ಯ ಕಟ್ಟುತ್ತಿರುವ ಕವಿ ನೀವು. ಕನ್ನಡ ಕಾವ್ಯಕ್ಕೆ ಇನ್ನೂ ಜೀವವಿದೆ ಎಂಬುದರ ಸಾಕ್ಷಿ ಇಲ್ಲಿನ ಕವನಗಳು.
ಬಿ. ಎಲ್. ರಾಜು
₹195.00
ನೆಲ್ಲುಕುಂಟೆ ವೆಂಕಟೇಶ್ ಅವರ ಈ ಸಂಕಲನ ಬಿಡಿಕವನಗಳಂತೆ ಕಂಡರೂ ಇಡೀ ಸಂಕಲನವೇ ಒಂದು ಕವನವೇನೋ ಎಂಬ ಭಾವನೆ ಓದುವವರಲ್ಲಿ ಮೂಡುತ್ತದೆ. ಒಟ್ಟಂದದಲ್ಲಿ ಮೂಡುವ ‘ಭಾವಸ್ಥಿತಿ’ ಓದುಗರಾದ ನಮ್ಮನ್ನು ಆವರಿಸುತ್ತದೆ. ಈ ಸನ್ನಿವೇಶದಲ್ಲಿ ‘ನಾವು ಯಾರು?’ ಎಂಬ ಪ್ರಶ್ನೆ ಹುಟ್ಟಲೇ ಬೇಕು. ಇಲ್ಲಿನ ಒಂದು ಕವಿತೆಯು ಬಹಳ ಕಟುವಾಗಿ ಟೀಕಿಸುವ ‘ನಡು ವಾರ್ಗಿಕ’ರಾಗಿ (ಮಿಡ್ಲ್ ಕ್ಲಾಸ್) ನಮ್ಮನ್ನು ನಾವೇ ನೋಡಿಕೊಳ್ಳದೆ, ಕವಿತೆಗಳನ್ನು ಓದುತ್ತಿರುವ ವಿದ್ಯಾವಂತರಾದ ನಮಗೆ ವಿಧಿಯಿಲ್ಲ. ಆಗ ಹುಟ್ಟುವುದು, ಸುಡುವಂತಹ ‘ಅಪರಾಧ ಪ್ರಜ್ಞೆ’. ಒಂದು ಕಾಲದಲ್ಲಿ ಸಿದ್ದಲಿಂಗಯ್ಯ, ದೇವನೂರ ಮಹಾದೇವರ ಬರವಣಿಗೆಯು ಈ ರೀತಿಯ ‘ನಾಚಿಕೆ’ ಹುಟ್ಟಿಸುವ ಪ್ರಯತ್ನ ಮಾಡಿದವು. ಆದರೆ ಮನುಷ್ಯರ ‘ವರ್ಗ ಸ್ವಭಾವ’ದಲ್ಲಿ ಬದಲಾವಣೆ ತರುವುದು ಸುಲಭವಲ್ಲ. ಕಾನೂನು ತಂದಷ್ಟು ಬದಲಾವಣೆಯನ್ನು ‘ಹೃದಯ ಸಾಕ್ಷಿ’(?) ತರುವುದಿಲ್ಲ. ಈ ಮಾತಿಗೆ ಸಾಕ್ಷಿಯೆನ್ನುವಂತೆ ಇಲ್ಲಿನ ಕವಿತೆಗಳ ಹತಾಶೆ ಇದೆ. ‘ಅಲ್ಲೇ ಕುಂತವ್ರೆ, ಅವರು ಅಲ್ಲೇ ಕುಂತವ್ರೆ’ ಎನ್ನುವುದೇ ಕಟುಸತ್ಯ.
ಇಲ್ಲಿನ ಕವನಗಳಲ್ಲಿ ಹೃದಯಯವಂತಿಕೆ ಮತ್ತು ಕನಸುಣಿ ವ್ಯಕ್ತಿತ್ವದ ಅಂತರಾಳದ ಮೊರೆತವಿದೆ. ನಾಡಿನಲ್ಲಿ ವಿಕರಾಳವಾಗಿ ಮೈದೋರಿರುವ ಕೇಡಿಗೆ ತಳಮಳಿಸುವ ತಲ್ಲಣಗಳ ಅಭಿವ್ಯಕ್ತಿಯಿದು. ನೆಲ್ಲುಕುಂಟೆ, ನಮ್ಮ ಕಾಲದ ಗಾಢ ವಿಷಾದದ ಕವಿ. ಒಳಿತನ್ನು ಆರ್ತವಾಗಿ ಆವಾಹಿಸುವ ಕೆಲವು ಕವನಗಳು, ಟಾಗೂರರ ಗೀತಾಂಜಲಿಯ ರಚನೆಗಳನ್ನು ನೆನಪಿಸುತ್ತವೆ. ಇಲ್ಲಿನ ಪುರಾಣ ರೂಪಕಗಳು ನವೀನವಾಗಿವೆ. ಆದರೆ ಮುಂಗಾರು ಮಳೆಯಂತೆ ಸುರಿವ ರೂಪಕಗಳನ್ನು ಹಿಡಿದು ಭೇದಿಸಿ ಕವಿತೆಯ ದನಿಯನ್ನು ತುಡುಕುವುದೇ ಸವಾಲು. ಒಂದೇ ರೂಪಕ ಪ್ರತಿಮೆಯಾಗಿ ಇಡೀ ಕವಿತೆಯನ್ನು ಆವರಿಸಿಕೊಳ್ಳುವ ರಚನೆಗಳು ಇಲ್ಲಿ ಕಡಿಮೆ. ಬಹಳಷ್ಟು ಕಡೆ ರೂಪಕಗಳ ಸರಮಾಲೆಯೇ ಕವಿತೆಯಾಗಿದೆ. ಕವಿಗಿರುವ ರೂಪಕಗಳ ಬಗೆಗಿನ ಸಹಜ ಸೆಳೆತವೊ, ಲೋಕದ ಬಾಳಿನಲ್ಲಿರುವ ಉರಿವ ದಿಟವನ್ನು ನೇರ ಹೇಳಲಾಗದ ಅಸಹಾಯಕತೆಯೊ ಎಂಬಂತೆ ಇಲ್ಲಿನ ಗೂಢ ಶೈಲಿಯಿದೆ.
ಗತದೆದುರು ವರ್ತಮಾನ, ವರ್ತಮಾನದೆದುರು ಗತಗಳನ್ನು ಎದುರಾಬದುರಾಗಿಟ್ಟು ರೂಪಕಗಳ ದಾಳ ಉರುಳಿಸುತ್ತಾ ಪ್ರಶ್ನೆಗಳ ಚದುರಂಗದ ಮೇಲೆ ಕಾವ್ಯ ಕಟ್ಟುತ್ತಿರುವ ಕವಿ ನೀವು. ಕನ್ನಡ ಕಾವ್ಯಕ್ಕೆ ಇನ್ನೂ ಜೀವವಿದೆ ಎಂಬುದರ ಸಾಕ್ಷಿ ಇಲ್ಲಿನ ಕವನಗಳು.
ಬಿ. ಎಲ್. ರಾಜು
Reviews
There are no reviews yet.